’ವಂಶದಲ್ಲಿ ಹುಟ್ಟಿದ್ದೇನೆ, ಆಡಳಿತ ಮಾಡುತ್ತೇನೆ ಎಂದರೆ ಒಪ್ಪಲಾಗದು’

ಆಡಳಿತ ನಡೆಸುವುದಕ್ಕೆ ಅರ್ಹತೆ ಇಲ್ಲದಿದ್ದರೂ, ಆ ವಂಶದಲ್ಲಿ ಹುಟ್ಟಿದೆ ಎಂಬ ಕಾರಣಕ್ಕೆ ದೇಶ ಆಳುತ್ತೇನೆ ಅನ್ನುವುದನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಸ್. ಎಂ.ಕೃಷ್ಣ ಅವರು ಪರೋಕ್ಷವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಕೇಂದ್ರ ಸಚಿವರೂ ಆದ ಡಿ.ವಿ.ಸದಾನಂದ ಗೌಡರ ಪರವಾಗಿ ಭಾನುವಾರ ರಾಜಾಜಿನಗರದ ಅಪಾರ್ಟ್‌ಮೆಂಟ್ ನಿವಾಸಿಗಳ ಜೊತೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಐದು ವರ್ಷಗಳ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಸಮಾಧಾನ ತಂದಿದೆ. ದೇಶಕ್ಕೆ ಬಲಿಷ್ಠ ಪ್ರಧಾನಿ ಹೇಗಿರಬೇಕು ಎಂಬುದನ್ನು ತೋರಿಕೊಟ್ಟವರು ಮೋದಿ. ಅವರು ಪ್ರಧಾನಿ ಆಗುವ ಮುನ್ನ ಹಗರಣಗಳು ಜನತೆಯನ್ನು ಕಾಡುತ್ತಿತ್ತು. ದೇಶಕ್ಕೆ ಭದ್ರ ನಾಯಕತ್ವ ಅಗತ್ಯವಿದ್ದಾಗ ಮೋದಿ ಅವರು ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸಿದರು. ಆರ್ಥಿಕ ವ್ಯವಸ್ಥೆ ಯಲ್ಲಿ ಭಾರತ, ಚೀನಾಕ್ಕೆ ಪೈಪೋಟಿ ನೀಡುತ್ತಿದೆ. ಅದಕ್ಕೆ ಮೋದಿ ಅವರ ತಪಸ್ಸು ಕಾರಣ. ಕೆಲವರಿಗೆ ಸಂಸಾರವೇ ರಾಷ್ಟ್ರ. ಆದರೆ, ನನಗೆ ರಾಷ್ಟ್ರವೇ ಸಂಸಾರ ಅನ್ನೋದು ಮೋದಿ ಅವರ ಮಾತು ಎಂದರು.


Leave a Reply

Your email address will not be published. Required fields are marked *

Translate