ವಾಕ್ ವಿಥಿನ್-2019 ಕಾರ್ಯಕ್ರಮ: ಉಪ ಮುಖ್ಯಮಂತ್ರಿ ಸಿ.ಎನ್.ಅಶ್ವಥ್ ನಾರಾಯಣರಿಂದ ಚಾಲನೆ

ಮೈಸೂರು ಡಿಸೆಂಬರ್.22.(ಕರ್ನಾಟಕ ವಾರ್ತೆ):- ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಕಳೆದ 35ವರ್ಷಗಳಿಂದ ಸಮಾಜ ಸೇವೆಗೆ ಅರ್ಪಿಸಿಕೊಂಡಿದೆ ಎಂದು ಉಪ ಮುಖ್ಯಮಂತ್ರಿ ಸಿ.ಎನ್. ಅಶ್ವಥ್ ನಾರಾಯಣ ಅವರು ಹೇಳಿದರು.
ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಸಂಸ್ಥೆಯ ವಿ-ಲೀಡ್ ಕ್ಯಾಂಪಸ್‍ನಲ್ಲಿ ಭಾನುವಾರ ಆಯೋಜಿಸಿದ್ದ ವಾಕ್ ವಿಥಿನ್-2019 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾವು ವಿದ್ಯೆ ಪಡೆದ ನಂತರ ನಮ್ಮ ಹಿತವನ್ನು ಬಯಸುತ್ತೇವೆಯೇ ಹೊರತು ಸಮಾಜಕ್ಕಾಗಿ ನಮ್ಮ ಸೇವೆ ಎಂಬುವುದನ್ನು ಮರೆತುಬಿಡುತ್ತೇವೆ. ಸಮಾಜ ಸೇವೆ ಮಾಡುವ ಗುಣ ಬರಲು ಅವರಿಗೆ ಸ್ವಾಮಿ ವಿವೇಕಾನಂದ, ರಾಮಕೃಷ್ಣ ಮಠ ಹಾಗೂ ಮುಕ್ತನಂದಾಸ್ವಾಮೀಜಿ ಸ್ಫೂರ್ತಿದಾಯಕರಾಗಿದ್ದಾರೆ ಎಂದು ತಿಳಿಸಿದರು.
ಎಲ್ಲರೂ ಈ ವಾಕ್ ವಿಥಿನ್ ನಡಿಗೆಗೆ ಹಣಕಾಸು ಹಾಗೂ ಶ್ರಮದಾನದ ಮೂಲಕ ಸಹಕರಿಸಬೇಕು. ಸ್ವ-ಇಚ್ಛೆಯಿಂದ ವಿವಿಧ ರಾಜ್ಯ ಹಾಗೂ ವಿವಿಧ ರಾಷ್ಟ್ರಗಳಿಂದ ಒಂದು ಗುರಿ ಇಟ್ಟುಕೊಂಡು ಈ ಕಾರ್ಯಕ್ರಮದಲ್ಲಿ ಹಲವಾರು ಮಂದಿ ಭಾಗವಹಿಸಿರುವುದು ಸಂತೋಷದ ವಿಚಾರ ಎಂದರು.
ಈ ಕಾರ್ಯಕ್ರಮ ವಾಕ್ ವಿಥಿನ್ (ನಮ್ಮೊಳಗಿನ ನಡಿಗೆ) ಎಂಬ ಧ್ಯೇಯದೊಂದಿಗೆ, ಜಗತ್ತು ಇಂದು ಪ್ರಗತಿಯತ್ತ ಸಾಗುತ್ತಿದ್ದರೂ ಸಮಾಜದಲ್ಲಿ ಹಿಂದುಳಿದ ಒಂದು ಸಮೂಹ ಇದೆ. ಇದು ಉತ್ತಮ ಸೌಕರ್ಯಗಳು ಸಿಗದೆ ಇರುವುದರಿಂದ, ಅವರ ನಡತೆ, ಸರ್ಕಾರದ ವೈಫಲ್ಯತೆಯಿಂದ ಹಿಂದುಳಿದರಬಹುದು. ಈ ನಡಿಗೆ ನಾವು ಆ ಜನಸಮೂಹವನ್ನು ಹೇಗೆ ಸಂಪರ್ಕಿಸುತ್ತೇವೆ ಎಂಬುದನ್ನು ತಿಳಿಸಿಕೊಡಲಿದೆ ಎಂದರು.
ಈ ನಡಿಗೆಯು ಡಾ|| ಆರ್.ಬಾಲಸುಬ್ರಮಣ್ಯಮ್ ನೇತೃತ್ವದಲ್ಲಿ ಮೈಸೂರು ಹಾಗೂ ಸುತ್ತಮುತ್ತಲಿನ 114 ಕಿ.ಮೀ. ಒಟ್ಟು 40 ಹಳ್ಳಿಗಳನ್ನು ಹಾದುಹೋಗುವ 8 ದಿನಗಳ ನಡಿಗೆಯಾಗಿದ್ದು, ನಡಿಗೆಯು ಇಂದಿನಿಂದ ಪ್ರಾರಂಭವಾಗಿ ಡಿಸೆಂಬರ್ 29ಕ್ಕೆ ಕೊನೆಗೊಳ್ಳಲಿದೆ. ಒಂದು ನೈಜ ಭಾರತದ ಅನುಭವದೊಂದಿಗೆ ಆಂತರಿಕ ಅನ್ವೇಷಣೆಯ ಪ್ರಯಾಣ ಇದಾಗಿದೆ.
ಕಾರ್ಯಕ್ರಮದಲ್ಲಿ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದ ಜೀ, ಎನ್ ಆರ್ ಫೌಂಡೇಷನ್ ಅಧ್ಯಕ್ಷರಾದ ಗುರು, ಸ್ವಾಮಿವಿವೇಕಾನಂದ ಯೂತ್ ಮೂವ್‍ಮೆಂಟ್‍ನ ಸಿ.ಇ.ಒ. ಡಾ|| ಕುಮಾರ್, ಸ್ವಾಮಿವಿವೇಕಾನಂದ ಹಾಗೂ ಗ್ರಾಮ್‍ನ ಫೌಂಡರ್ ಡಾ|| ಬಾಲಸುಬ್ರಹ್ಮಣ್ಯ, ಚಿದಾನಂದ ಗೌಡ, ನಾಗನಂದ, ಮಾದೇಗೌಡ, ಚಕ್ರವರ್ತಿ
ಹಾಗೂ ಇನ್ನಿತರರು ಉಪಸ್ಥಿತರಿದ್ದರು.


Leave a Reply

Your email address will not be published. Required fields are marked *

Translate