ವಿಷ್ಣು ಸ್ಮಾರಕಕ್ಕೆ ಸಿಕ್ತು ಗ್ರೀನ್ ಸಿಗ್ನಲ್, ಮೈಸೂರಲ್ಲಿ ಪೊಲೀಸ್ ಭದ್ರತೆಯಲ್ಲಿ ಬೃಹತ್ ಸ್ಮಾರಕ..!

‘ಸಾಹಸ ಸಿಂಹ‘ ಅಭಿನವ ಭಾರ್ಗವ ವಿಷ್ಣುವರ್ಧನ್​ ಸ್ಮಾರಕ ನಿರ್ಮಾಣ ವಿಚಾರ ದಶಕಗಳ ಕನಸು. ಸುಮಾರು ಒಂಭತ್ತು ವರ್ಷಗಳಿಂದ ನಡೀತಿದ್ದ ಹಗ್ಗ ಜಗ್ಗಾಟಕ್ಕೆ ಇದೀಗ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ಹಿಂದೆ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ನಿರ್ಮಿಸುವಂತೆ ಅಭಿಮಾನಿಗಳು ಒತ್ತಾಯಿಸಿದ್ರು ಆದ್ರೆ ಕುಟುಂಬದವರು ಸ್ಮಾರಕ ಮೈಸೂರಲ್ಲಿ ಆಗಲಿ ಅನ್ನೋದು ಅವರ ಒತ್ತಾಸೆಯಾಗಿತ್ತು.
ಸ್ಮಾರಕದ ಜೊತೆ ಫಿಲ್ಮ್ ಸ್ಟುಡಿಯೋ..!
ಆದ್ರಂತೆ ಮೈಸೂರಲ್ಲಿ ವಿಷ್ಣುವರ್ಧನ್​ರ ಬೃಹತ್ ಸ್ಮಾರಕ ನಿರ್ಮಾಣಕ್ಕೆ ಕೊನೆಗೂ ಹಸಿರು ನಿಶಾನೆ ಸಿಕ್ಕಿದೆ. ಈ ಬಗ್ಗೆ ಮಾತಾನಾಡಿರೋ ವಿಷ್ಣುವರ್ಧನ್ ಅಳಿಯ ಅನಿರುದ್​​ ಮೈಸೂರಲ್ಲಿ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಜಾಗ ನಿಗದಿ ಪಡಿಸಿತ್ತು ಆದರೆ ಅಲ್ಲಿನ ರೈತರು ಇದು ಗೋಮಾಳ ಜಾಗವಾಗಿದ್ದು ಇಲ್ಲಿ ಸ್ಮಾರಕಕ್ಕೆ ಅವಕಾಶ ನೀಡುವುದಿಲ್ಲ ಅಂತಾ ವಿರೋಧ ವ್ಯಕ್ತಪಡಿಸಿದ್ರು. ಆ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಆದ್ರೀಗ ಸರ್ಕಾರ ಆ ಪ್ರಕರಣವನ್ನು ಗೆದ್ದಿದೆ. ಸುಮಾರು 5 ಎಕರೆ 40 ಗುಂಟೆ ಜಾಗ ನೀಡಲಾಗಿದ್ದು ಸುಮಾರು 2 ವರ್ಷಗಳ ಕಾಲ ಸ್ಮಾರಕ ನಿರ್ಮಾಣ ಕೆಲಸವಾಗಲಿದೆ ಅಂತಾ ಸ್ಪಷ್ಟ ಪಡಿಸಿದ್ದಾರೆ.

ಜೊತೆಗೆ ಸ್ಮಾರಕದ ಬಳಿಯಲ್ಲಿಯೇ ಫಿಲ್ಮ ಸ್ಟುಡಿಯೋ ನಿರ್ಮಾಣವಾಗಲಿದೆ ಅಂತಾ ಹೇಳಿದ್ದಾರೆ. ಸದ್ಯ ವಿಷ್ಣು ಸ್ಮಾರಕ ಎಲ್ಲಿ? ಯಾವಾಗ ನಿರ್ಮಾಣವಾಗುತ್ತೆ ಅಂತಾ ಕಾಯುತ್ತಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ.

Translate