ಅಮರಗೋಳಕ್ಕೆ ಇಂದು ಸಿಎಂ

ನರಗುಂದ: ಬೆಣ್ಣೆಹಳ್ಳ, ತುಪ್ಪರಿ ಹಳ್ಳದ ಎರಡು ಬೃಹತ್ ಏತ ನೀರಾವರಿ ಯೋಜನೆ ಉದ್ಘಾಟನೆ ಹಾಗೂ ಮಲಪ್ರಭೆ ಕಾಲುವೆ ನವೀಕರಣ ಕಾಮಗಾರಿಗಳ ಭೂಮಿಪೂಜೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಡಿ. 18ರಂದು ಮಧ್ಯಾಹ್ನ 2 ಗಂಟೆಗೆ ನವಲಗುಂದ ತಾಲೂಕಿನ ಅಮರಗೋಳ ಗ್ರಾಮಕ್ಕೆ ಆಗಮಿಸಲಿದ್ದಾರೆ ಎಂದು ಸಚಿವ ಸಿ.ಸಿ. ಪಾಟೀಲ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರಗುಂದ, ನವಲಗುಂದ ಮತಕ್ಷೇತ್ರದ ಕಟ್ಟ ಕಡೆಯ ರೈತರ ಜಮೀನುಗಳಿಗೆ ನೀರು ದೊರಕಿಸಿಕೊಡುವ ಉದ್ದೇಶದಿಂದ ಒಟ್ಟು 38 ಕೋಟಿ ರೂ. ವೆಚ್ಚದಲ್ಲಿ ಬೆಣ್ಣೆಹಳ್ಳ ಮತ್ತು ತುಪ್ಪರಿಹಳ್ಳಕ್ಕೆ ಏತ ನೀರಾವರಿ ಯೋಜನೆ ನಿರ್ವಿುಸಲಾಗಿದೆ. ಇದರಿಂದ 7 ಕಿ.ಮೀ. ವ್ಯಾಪ್ತಿಯ 6,739 ಹೆಕ್ಟೇರ್ ಪ್ರದೇಶದ ರೈತರ ಕೃಷಿ ಜಮೀನುಗಳಿಗೆ ನೀರು ದೊರೆಯಲಿದೆ. ಮಲಪ್ರಭೆ ಕಾಲುವೆಗಳ ನವೀಕರಣಕ್ಕಾಗಿ ನಾನು ಮತ್ತು ಸಚಿವ ಜಗದೀಶ ಶೆಟ್ಟರ್, ಶಂಕರಪಾಟೀಲ ಮುನೇನಕೊಪ್ಪ ಮುಖ್ಯಮಂತ್ರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರಿಂದಾಗಿ ಕಾಲುವೆ ನವೀಕರಣಕ್ಕಾಗಿ ರಾಜ್ಯ ಸರ್ಕಾರ 2,100 ಕೋಟಿ ರೂ. ಬಿಡುಗಡೆ ಮಾಡಿದೆ ಎಂದರು.

ಈ ಯೋಜನೆಯ ಪ್ರಥಮ ಹಂತದ 1,000 ಕೋಟಿ ರೂ. ಅನುದಾನ ಈಗಾಗಲೇ ಬಿಡುಗಡೆಗೊಂಡಿದ್ದು, ಅಂದಾಜು 300 ಕೋಟಿ ರೂ. ನರಗುಂದ, 300 ಕೋಟಿ ರೂ. ನವಲಗುಂದ, 200 ಕೋಟಿ ರೂ. ಸವದತ್ತಿ, ಇನ್ನುಳಿದ 200 ಕೋಟಿ ರೂ. ರಾಮದುರ್ಗ ಮತ ಕ್ಷೇತ್ರಗಳ ವ್ಯಾಪ್ತಿಯ ರೈತರ ಜಮೀನಿನ ಕಾಲುವೆಗಳನ್ನು ನವೀಕರಣಗೊಳಿಸಲಾಗುವುದು ಎಂದು ತಿಳಿಸಿದರು.

ಸಚಿವರಾದ ಜಗದೀಶ ಶೆಟ್ಟರ್, ಎಸ್.ಆರ್. ಬೊಮ್ಮಾಯಿ, ನವಲಗುಂದ ಶಾಸಕ ಶಂಕರಪಾಟೀಲ ಮುನೇನಕೊಪ್ಪ, ಸವದತ್ತಿ ಶಾಸಕ ಆನಂದ ಮಾಮನಿ, ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಪಾಲ್ಗೊಳ್ಳಲಿದ್ದಾರೆ ಎಂದು ಸಚಿವ ಸಿ.ಸಿ. ಪಾಟೀಲ ತಿಳಿಸಿದರು.

Translate