ಅಮೆಜಾನ್‌, ಫ್ಲಿಪ್‌ಕಾರ್ಟ್‌ನಿಂದ ಡಿಸ್ಕೌಂಟ್‌ ವಿವರ ಕೇಳಿದ ಸರ್ಕಾರ

ನವದೆಹಲಿ: ಅಮೆಜಾನ್ ಮತ್ತು ಫ್ಲಿಪ್​ಕಾರ್ಟ್ ಮೂಲಕ ಯಾವ ಕಂಪನಿಗಳು ಹೆಚ್ಚಿನ ವಸ್ತುಗಳನ್ನು ಮಾರಾಟ ಮಾಡುತ್ತದೆ ಎಂಬುದನ್ನು ತಿಳಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಈ ಸಂಬಂಧ ಅದು ವಿವರವಾದ ಪ್ರಶ್ನಾವಳಿಯನ್ನು ಎರಡೂ ಕಂಪನಿಗಳಿಗೆ ಕಳಿಸಿದೆ. ಇ-ಕಾಮರ್ಸ್ ಕಂಪನಿಗಳು ನಿಯಮಗಳನ್ನು ಉಲ್ಲಂಘಿಸುತ್ತಿವೆಯೇ ಎಂಬ ಬಗ್ಗೆ ತನಿಖೆ ನಡೆಸುವಂತೆ ವಾಣಿಜ್ಯ ಸಚಿವ ಪಿಯೂಷ್ ಗೊಯಲ್ ಸೂಚಿಸಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ. ‘ಉತ್ಪನ್ನಗಳ ಮೇಲೆ ರಿಯಾಯಿತಿ ಘೋಷಿಸಲು ಹಾಗೂ ಚಿಲ್ಲರೆ ಮಾರಾಟದ ಮೇಲೆ ಏಕಸ್ವಾಮ್ಯ ಸಾಧಿಸುವ ಸಲುವಾಗಿ ಬೆಲೆಗಳಲ್ಲಿ ತೀರಾ ಕಡಿತ ಮಾಡುವ ಹಕ್ಕು ಆನ್​ಲೈನ್ ಸಂಸ್ಥೆಗಳಿಗೆ ಇಲ್ಲ’ ಎಂದು ಗೋಯಲ್ ಹೇಳಿದ್ದರು. ಸರ್ಕಾರದ ಪ್ರಶ್ನಾವಳಿಗೆ ಅಮೆಜಾನ್ ಪ್ರತಿಕ್ರಿಯೆ ನೀಡಿದ್ದು, ಫ್ಲಿಪ್​ಕಾರ್ಟ್ ಇನ್ನೂ ಉತ್ತರಿಸಬೇಕಿದೆ.

ಅಮೆಜಾನ್ ಮತ್ತು ಫ್ಲಿಪ್​ಕಾರ್ಟ್ ವಿದೇಶಿ ನೇರ ಹೂಡಿಕೆ ನಿಯಮಗಳನ್ನು (ಎಫ್​ಡಿಐ) ಉಲ್ಲಂಘಿಸುತ್ತಿವೆ ಎಂಬ ಆರೋಪ ಕೇಳಿಬಂದಿದೆ. ಆನ್​ಲೈನ್ ಮಾರಾಟ ಸಂಸ್ಥೆಗಳು ಅತಿಯಾದ ರಿಯಾಯಿತಿ ನೀಡುವುದರಿಂದ ಚಿಲ್ಲರೆ ವ್ಯಾಪಾರಿಗಳಿಗೆ ಹೊಡೆತ ಬೀಳುತ್ತದೆ ಎಂಬ ವಾದವೂ ಇದೆ.

Translate