ನವದೆಹಲಿ:ಅಯೋಧ್ಯೆ ಜಮೀನು ವಿವಾದದ ಮೂಲ ದಾವೆಯ ಮೇಲೆ 40 ದಿನಗಳ ಮ್ಯಾರಥಾನ್ ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪಂಚ ಸದಸ್ಯರ ಸಾಂವಿಧಾನಿಕ ಪೀಠ, ಭಾರತದ ಸಾಮಾಜಿಕ-ರಾಜಕೀಯ ಇತಿಹಾಸವನ್ನೇ ಬದಲಿಸಿದ 130 ವರ್ಷಗಳ ಹಿಂದಿನ ಈ ಪ್ರಕರಣದ ಅಂತಿಮ ತೀರ್ಪನ್ನು ಶನಿವಾರ ಬೆಳಗ್ಗೆ 10.30ಕ್ಕೆ ಪ್ರಕಟಿಸಲಿದೆ.
ಮುಂದಿನ ಬುಧವಾರ ಅಥವಾ ಗುರುವಾರ ತೀರ್ಪು ಬರಬಹುದೆಂದು ಭಾವಿಸಲಾಗಿತ್ತಾದರೂ ಅನಿರೀಕ್ಷಿತ ಎಂಬಂತೆ ಶುಕ್ರವಾರ ರಾತ್ರಿ 9 ಗಂಟೆ ವೇಳೆಗೆ ಸುಪ್ರೀಂಕೋರ್ಟ್ ವೆಬ್ಸೈಟ್ನಲ್ಲಿ ಶನಿವಾರ ತೀರ್ಪು ಪ್ರಕಟಿಸುವ ಬಗ್ಗೆ ಮಾಹಿತಿ ನೀಡಲಾಯಿತು. ಶನಿವಾರ ಕೋರ್ಟ್ಗೆ ರಜೆಯಿದ್ದರೂ ಸಿಜೆಐ ಪ್ರಕರಣದ ಸಹ ನ್ಯಾಯಮೂರ್ತಿಗಳೊಂದಿಗೆ ರ್ಚಚಿಸಿಯೇ ತೀರ್ಪು ನೀಡುವ ತೀರ್ವನಕ್ಕೆ ಬಂದಿದ್ದಾರೆ. ಇದಕ್ಕೂ ಮುನ್ನ ಉತ್ತರ ಪ್ರದೇಶ ಮುಖ್ಯ ಕಾರ್ಯದರ್ಶಿ ಜತೆೆ ಮಾತುಕತೆ ನಡೆಸಿದ್ದ ಸಿಜೆಐ ಭದ್ರತಾ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಭದ್ರತೆ ಬಗ್ಗೆ ಮಾಹಿತಿ ತೃಪ್ತಿಕರ ಎನಿಸಿದ ಬಳಿಕವೇ ಈ ತೀರ್ಮಾನ ಕೈಗೊಂಡರು ಎಂದು ಹೇಳಲಾಗಿದೆ.
ಏತನ್ಮಧ್ಯೆ ರಫೇಲ್ ವಿಮಾನ ಖರೀದಿ, ಸಿಜೆಐ ಅವರನ್ನು ಆರ್ಟಿಐ ವ್ಯಾಪ್ತಿಗೆ ತರಬೇಕೆ ಬೇಡವೇ ಹಾಗೂ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಬೇಕೇ ಬೇಡವೇ ಎಂಬ ಪ್ರಕರಣಗಳ ಬಗ್ಗೆಯೂ ಸಿಜೆಐ ನೇತೃತ್ವದ ನ್ಯಾಯಪೀಠ ಮುಂದಿನ ಶುಕ್ರವಾರದ ಒಳಗಾಗಿ ತೀರ್ಪು ನೀಡಬೇಕಿರುವುದರಿಂದ, ಅತ್ಯಂತ ಸೂಕ್ಷ್ಮ ಅಯೋಧ್ಯೆ ಪ್ರಕರಣಕ್ಕೆ ಶನಿವಾರವೇ ತೀರ್ಪು ನೀಡಲು ಮುಂದಾಗಿರಬಹುದು ಎಂದೂ ರ್ಚಚಿಸಲಾಗಿದೆ.
ಶನಿವಾರ ಅಂತಿಮ ತೀರ್ಪಿನ ಮೂಲಕ ಸುಪ್ರೀಂಕೋರ್ಟ್ ಅಯೋಧ್ಯೆಯಲ್ಲಿ ಹೊಸ ಚರಿತ್ರೆ ಬರೆಯುವುದೋ ಇಲ್ಲವೋ ಗೊತ್ತಿಲ್ಲ. ಆದರೆ, ನ. 17ರಂದು ನಿವೃತ್ತಿಯಾಗುತ್ತಿರುವ ಅಸ್ಸಾಂ ಮೂಲದ ಸಿಜೆಐ ರಂಜನ್ ಗೊಗೊಯ್ ಮಾತ್ರ ಈ ತೀರ್ಪಿನ ಮೂಲಕ ಚರಿತ್ರೆಯ ಪುಟಗಳಲ್ಲಿ ಮಹತ್ತರ ಸ್ಥಾನ ಪಡೆಯುವುದಂತೂ ನಿಜ. ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ರಾಮನ ಮಂದಿರ ನಿರ್ವಣವಾಗಬೇಕು ಎಂಬುದು ಹಿಂದು ಶ್ರದ್ಧಾಳುಗಳ ಆಶಯವಾಗಿದ್ದರೆ, ಧ್ವಂಸಗೊಂಡ ಬಾಬರಿ ಮಸೀದಿ ಅದೇ ಸ್ಥಳದಲ್ಲಿ ಪುನರುತ್ಥಾನಗೊಳ್ಳಬೇಕು ಎನ್ನುವುದು ಸುನ್ನಿ ವಕ್ಪ್ ಮಂಡಳಿ ಮತ್ತು ಬೆಂಬಲಿಗರ ಬೇಡಿಕೆಯಾಗಿದೆ.
ನಿಷೇಧಾಜ್ಞೆ ಜಾರಿ: ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿಯಾಗಿದ್ದು, ಶನಿವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.