ಟೆಂಡರ್ ಶ್ಯೂರ್ ರಸ್ತೆ ಇಂದು ಲೋಕಾರ್ಪಣೆ

ಹುಬ್ಬಳ್ಳಿ: ರಸ್ತೆಗಳು ಒಂದು ನಗರದ ಮರ್ಯಾದೆಯನ್ನು ಅಳೆಯುವ ಮಾನದಂಡಗಳು ಎಂಬ ಮಾತು ಇದೆ. ರಸ್ತೆ ಸಂಪರ್ಕ ಚೆನ್ನಾಗಿರುವುದಷ್ಟೇ ಅಲ್ಲ, ವಿನೂತನವಾಗಿಯೂ ಇದ್ದರೆ ಅದು ಆಯಾ ಭಾಗಕ್ಕೊಂದು ಹೆಮ್ಮೆ. ಇತರ ಕಡೆಯವರಿಗೆ ಮಾದರಿಯೂ ಹೌದು. ಅಂಥ ಮಾದರಿ ರಸ್ತೆಯೊಂದನ್ನು ಹುಬ್ಬಳ್ಳಿ ನಗರ ಹೊಂದಿದೆ. ಅದು ವಿದ್ಯಾನಗರದಿಂದ ತೋಳನಕೆರೆವರೆಗೆ ನಿರ್ಮಾಣ ಗೊಂಡಿರುವ ‘ಟೆಂಡರ್ ಶ್ಯೂರ್ ರಸ್ತೆ’. ಡಿ. 18ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ. 22.7 ಮೀಟರ್ ಅಗಲ ಹಾಗೂ 2.19 ಕಿ.ಮೀ. ಉದ್ದಕ್ಕೂ ವಿದ್ಯುತ್ ತಂತಿ ಮಾರ್ಗ, ನೀರು ಸರಬರಾಜು, ದೂರ ಸಂಪರ್ಕ, ಅಡುಗೆ ಅನಿಲ, ಒಳಚರಂಡಿ ಕೊಳವೆ ಮಾರ್ಗಗಳೆಲ್ಲವನ್ನು ಭೂಗತ ಮಾಡಿರುವುದು, ಇಕ್ಕೆಲದಲ್ಲಿ ಫುಟ್​ಪಾತ್ ಮತ್ತು ಸೈಕಲ್ ಟ್ರ್ಯಾಕ್ ಹೊಂದಿರುವ ಕಾಂಕ್ರೀಟ್ ರಸ್ತೆ ಇದು. ರಾಜ್ಯ ಸರ್ಕಾರ, ಹು-ಧಾ ಬಿಆರ್​ಟಿಎಸ್ ಕಂಪನಿ ಹಾಗೂ ಲೋಕೋಪಯೋಗಿ ಇಲಾಖೆ ಸಹಭಾಗಿತ್ವದಲ್ಲಿ ಸುಮಾರು 44 ಕೋಟಿ ರೂ. ವೆಚ್ಚದಲ್ಲಿ ಇದು ನಿರ್ವಣವಾಗಿದೆ.

ಎಲ್ಲ ಕೊಳವೆ ಮಾರ್ಗಗಳನ್ನು ಕಾಂಕ್ರೀಟ್ ರಸ್ತೆಯ ಇಕ್ಕೆಲದಲ್ಲಿ ಭೂಗತ ಮಾಡಿದ್ದು ದುರಸ್ತಿ, ನಿರ್ವಹಣೆಗಾಗಿ ರಸ್ತೆ ಅಗೆಯುವ ಪ್ರಶ್ನೆಯೇ ಬರುವುದಿಲ್ಲ.

Translate