ತ್ರಿಕೋನ ಸ್ಪರ್ಧೆಯ ನಡುವೆ ಹ್ಯಾಟ್ರಿಕ್ ಕನಸು ಕಾಣುತ್ತಿರುವ ಕೈ ಅಭ್ಯರ್ಥಿ ಮಂಜುನಾಥ್

ಹುಣಸೂರು ಕ್ಷೇತ್ರದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್​ನಿಂದ ಎಚ್.ವಿಶ್ವನಾಥ್ ಗೆದ್ದು ಶಾಸಕರಾಗಿದ್ದರು. ಆದರೆ, ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದು, ರಾಜೀನಾಮೆ ನೀಡುವ ಮೂಲಕ ಸರ್ಕಾರ ಬೀಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇದೀಗ ಬಿಜೆಪಿ ಅಭ್ಯರ್ಥಿಯಾಗಿ ವಿಶ್ವನಾಥ್ ಅವರೇ ಕಣಕ್ಕಿಳಿದಿದ್ದು, ಕಾಂಗ್ರೆಸ್​ನಿಂದ ಎಚ್​.ಪಿ.ಮಂಜುನಾಥ್ ಹಾಗೂ ಜೆಡಿಎಸ್​ನಿಂದ ಸೋಮಶೇಖರ್ ಅಭ್ಯರ್ಥಿಗಳಾಗಿದ್ದಾರೆ. 
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರದಿಂದ 17 ಮಂದಿ ನಾಮಪತ್ರ ಸಲ್ಲಿಕೆ ಮಾಡಿದ್ದರು‌. 2 ನಾಮಪತ್ರ ತಿರಸ್ಕೃತಗೊಂಡು 15 ಮಂದಿ ಕಣದಲ್ಲಿದ್ದರು, ಇವರಲ್ಲಿ 13 ಮಂದಿ ಠೇವಣಿ ಕಳೆದುಕೊಂಡಿದ್ದರು. ಆ ಚುನಾವಣೆಯಲ್ಲಿ  ಒಟ್ಟು 1,86,525 ಮತಗಳು ಚಲಾವಣೆಯಾಗಿದ್ದವು. ಜೆಡಿಎಸ್​ನಿಂದ ಸ್ಪರ್ಧಿಸಿದ್ದ  ಅಡಗೂರು ಎಚ್.ವಿಶ್ವನಾಥ್ 91,667 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ಅವರನ್ನು 8,575 ಮತಗಳ ಅಂತರದಿಂದ ಸೋಲಿಸಿದ್ದರು. ಎಚ್.ಪಿ.ಮಂಜುನಾಥ್ ಅವರು 83,092 ಮತಗಳನ್ನು ಪಡೆದು, ಹ್ಯಾಟ್ರಿಕ್ ಗೆಲುವಿನಿಂದ ವಂಚಿತರಾದರು. ಉಳಿದಂತೆ ಬಿಜೆಪಿಯ ಜೆ.ಎಸ್.ರಮೇಶ್​ಕುಮಾರ್ 6,406 ಮತಗಳನ್ನು ಪಡೆಯುವ ಮೂಲಕ ಠೇವಣಿಯನ್ನೂ ಕಳೆದುಕೊಂಡಿದ್ದರು. 
ಹುಣಸೂರು ಕ್ಷೇತ್ರದಲ್ಲಿ ಪುರುಷ ಮತದಾರರು  1,14,146 ಹಾಗೂ ಮಹಿಳಾ ಮತದಾರರು 1,12,770 ಮತ್ತು ಇತರೆ 04 ಮತಗಳು ಸೇರಿ ಒಟ್ಟು 2,26,920 ಮತದಾರರಿದ್ದಾರೆ. ಇನ್ನು ಕ್ಷೇತ್ರದ ಜಾತಿವಾರು ಲೆಕ್ಕಾಚಾರಕ್ಕೆ ಬರುವುದಾದರೆ, ಎಸ್​ಸಿ 54,000, ಒಕ್ಕಲಿಗ 45,000,  ಕುರುಬ 28,000, ಎಸ್​ಟಿ 26,000, ಮುಸ್ಲಿಂ 15,000, ಲಿಂಗಾಯತ 12,000, ಆಚಾರಿ 12,000 ಹಾಗೂ ಇತರೆ 40,000 ಮತದಾರರಿದ್ದಾರೆ. 
ಹುಣಸೂರು ಉಪಚುನಾವಣೆ ಈ ಬಾರಿ ಜಿದ್ದಾಜಿದ್ದಿನ‌ ಕಣವಾಗಿದೆ. ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಗೆಲುವಿಗಾಗಿ ಮೂರು ಪಕ್ಷಗಳ ಅಭ್ಯರ್ಥಿಗಳ ಭರ್ಜರಿ ಕಸರತ್ತು ನಡೆಸುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಚ್.ಪಿ.ಮಂಜುನಾಥ್ ಅವರು ಕಳೆದ ಬಾರಿ ಜಿಟಿಡಿ ಮಗನ ಸಂಘಟನೆಯಿಂದಾಗಿ ಕೆಲವೇ ಮತಗಳ ಅಂತರದಿಂದ ಸೋಲುವ ಮೂಲಕ ಹ್ಯಾಟ್ರಿಕ್ ಗೆಲುವಿನಿಂದ ವಂಚಿತರಾಗಿದ್ದರು. ಇದೀಗ ಮತ್ತೆ ಹ್ಯಾಟ್ರಿಕ್ ಕನಸನ್ನು ನನಸು ಮಾಡಿಕೊಳ್ಳಲು ಕ್ಷೇತ್ರದಲ್ಲಿ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಅವರು ಮಂಜುನಾಥ್​ಗೆ ಸಂಪೂರ್ಣ ಬೆಂಬಲ ನೀಡಿ, ಬೆನ್ನೆಲುಬಾಗಿ ನಿಂತಿರುವುದು ಕಾಂಗ್ರೆಸ್ ಗೆಲುವಿನ ಅಲೆ ಎದ್ದಿದೆ. 
ವಿಶ್ವನಾಥ್ ಜೆಡಿಎಸ್​ ಸರ್ಕಾರ ಬೀಳಲು ಕಾರಣಕರ್ತರಾಗಿರುವುದರಿಂದ ಕ್ಷೇತ್ರದ ಜನರಲ್ಲಿ ಅವರ ಮೇಲೆ ಅಸಮಾಧಾನ ಇರುವುದು ನಿಜ. ಅಲ್ಲದೇ ಬಿಜೆಪಿ ಈ ಭಾಗದಲ್ಲಿ ಅಷ್ಟೇನೂ ಪ್ರಬಲವಾಗಿಲ್ಲ.ಜೆಡಿಎಸ್‌ನಿಂದ ಅವಮಾನ ಆಯ್ತು ಅನ್ನುವ ಆರೋಪ ಮತ್ತು ಕುರುಬ ಮತ ಬ್ಯಾಂಕ್, ಮೋದಿ,ಅಮಿತ್ ಶಾ ವರ್ಚಸ್ಸು, ಗೆದ್ದರೆ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗುವ ಅವಕಾಶ ಇರುವುದು ವಿಶ್ವನಾಥ್ ಅವರಿಗೆ ಇಲ್ಲಿನ ಸಕಾರಾತ್ಮಕ ಅಂಶಗಳಾಗಿವೆ. 
ಇನ್ನು ಜೆಡಿಎಸ್​ನಿಂದ ಸ್ಪರ್ಧಿಸಿರುವ ಸೋಮಶೇಖರ್ ಸ್ಥಳೀಯ ಅಭ್ಯರ್ಥಿಯಾಗಿದ್ದು, ಇವರ ಗೆಲುವಿಗೆ ಎಚ್.ಡಿ.ಕುಮಾರಸ್ವಾಮಿ ಸಾಕಷ್ಟು ಪ್ರಚಾರ ಮಾಡುತ್ತಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ ಇಲ್ಲಿನ ಉಸ್ತುವಾರಿ ವಹಿಸಿಕೊಂಡಿರುವ ಸೋಮಶೇಖರ್ ಗೆಲುವಿನ ಆಸೆಗೆ ಆನೆ ಬಲ ಸಿಕ್ಕಂತಾಗಿದೆ. ಒಟ್ಟಿನಲ್ಲಿ ಹುಣಸೂರಿನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಯಾರ ಕೊರಳಿಗೆ ಗೆಲುವಿನ ಮಾಲೆ ಸಿಗಲಿದೆ ಎಂಬುದು ಫಲಿತಾಂಶದ ದಿನ ಬಹಿರಂಗವಾಗಲಿದೆ. 

Translate