ಪೌರತ್ವ ತಿದ್ದುಪಡಿ ಮಸೂದೆಗೆ ಲೋಕಸಭೆ ಅಂಗೀಕಾರ

ನೆರೆದೇಶಗಳಿಂದ ಭಾರತಕ್ಕೆ ವಲಸೆ ಬಂದು ಇಲ್ಲಿ ನೆಲೆಸಿರುವ ಮುಸ್ಲಿಮೇತರರಿಗೆ ಭಾರತದ ಪೌರತ್ವವನ್ನು ನೀಡಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ತಿದ್ದುಪಡಿಗೆ ಉದ್ದೇಶಿಸಿರುವ ಬಹುಚರ್ಚಿತ ಪೌರತ್ವ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ತಡರಾತ್ರಿವರೆಗೂ ಗಂಭೀರ ಚರ್ಚೆ ನಡೆಯಿತು.

ಮೊದಲಿಗೆ ಈ ತಿದ್ದುಪಡಿ ಮಸೂದೆಗೆ ಕೆಲವೊಂದು ಬದಲಾವಣೆಗಳನ್ನು ಸೂಚಿಸಿ ವಿಪಕ್ಷ ಸದಸ್ಯರು ಮಂಡಿಸಿದ್ದ ಪ್ರಸ್ತಾಪಗಳನ್ನು ಧ್ವನಿಮತಕ್ಕೆ ಹಾಕಲಾಯಿತು. ಬಳಿಕ ತಿದ್ದುಪಡಿ ಮಸೂದೆಯನ್ನು ಮತಕ್ಕೆ ಹಾಕಲಾಯಿತು. ತಿದ್ದುಪಡಿ ಪರವಾಗಿ 311 ಮತಗಳು ಬಿದ್ದರೆ ಮಸೂದೆಯನ್ನು ವಿರೋಧಿಸಿ 80 ಮತಗಳು ಬಿದ್ದವು. ಈ ಮೂಲಕ ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕೃತಗೊಂಡಿದೆ ಎಂದು ಲೋಕಸಭಾಧ್ಯಕ್ಷರು ಘೋಷಿಸಿದರು.

ಇನ್ನು ಈ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರಗೊಳ್ಳಬೇಕಿದೆ.

Translate