ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವಲ್ಲಿ ಬಿಜೆಪಿ ನಾಯಕರು ವಿಫಲರಾಗಿದ್ದು, ಇಂದು ಬೆಳಗ್ಗೆ ಮತ್ತೊಂದು ಸುತ್ತಿನ ಸಭೆ ನಡೆಸಲು ನಿರ್ಧರಿಸಿದ್ದಾರೆ.
ಅಭ್ಯರ್ಥಿಗಳ ಆಯ್ಕೆ ಕಸರತ್ತು ಆರಂಭಿಸಿರುವ ಬಿಜೆಪಿ ಸೋಮವಾರ ಬೆಂಗಳೂರು ದಕ್ಷಿಣ, ಮಂಡ್ಯ ಮತ್ತು ಹಾಸನ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಸಂಬಂಧ ಚರ್ಚೆ ನಡೆಸಿದೆ. ಇದರಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ವಿಚಾರದಲ್ಲಿ ಮಾತ್ರ ಅಂತಿಮ ತೀರ್ಮಾನಕ್ಕೆ ಬರಲಾಗಿದೆ. ಸುಮಲತಾ ಸ್ಪರ್ಧೆಯ ನಿರ್ಧಾರದ ಗೊಂದಲ ಬಿಜೆಪಿ ನಾಯಕರಲ್ಲಿಯೂ ಗೊಂದಲ ಸೃಷ್ಠಿಸಿದೆ.
ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ ಮಾಜಿ ಡಿಸಿಎಂ ಆರ್.ಅಶೋಕ್ ನೇತೃತ್ವದ ನಾಯಕರ ನಿಯೋಗ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚೆ ನಡೆಸಿತು. ಈ ವೇಳೆ ತೇಜಸ್ವಿನಿ ಅನಂತ್ ಕುಮಾರ್ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲದೇ ಸಮ್ಮತಿಯ ಮುದ್ರೆ ಒತ್ತಲಾಯಿತು. ಆದರೆ ಉಳಿದೆರಡು ಕ್ಷೇತ್ರಗಳಲ್ಲಿ ಗೊಂದಲ ಮುಂದುವರೆದಿದೆ.
ಮಂಡ್ಯದಲ್ಲಿ ಅಭ್ಯರ್ಥಿ ಹಾಕಬೇಕೋ ಅಥವಾ ಸುಮಲತಾರನ್ನು ಬೆಂಬಲಿಸಬೇಕೋ ಎನ್ನುವ ಕುರಿತು ಚರ್ಚೆ ನಡೆಸಲಾಯಿತು. ಒಂದು ವೇಳೆ ಸುಮಲತಾ ಬೆಂಬಲಕ್ಕೆ ನಿಂತು ಅಭ್ಯರ್ಥಿ ಹಾಕದೇ ಇದ್ದಲ್ಲಿ ಅವರು ನಾಮಪತ್ರ ವಾಪಸ್ ಪಡೆದರೆ ಏನು ಮಾಡುವುದು ಎನ್ನುವ ಪ್ರಶ್ನೆ ನಾಯಕರಲ್ಲಿ ಮೂಡಿದ್ದು ಮುಂಜಾಗ್ರತಾ ಕ್ರಮವಾಗಿ ನಮ್ಮ ಅಭ್ಯರ್ಥಿಯನ್ನು ನಿಲ್ಲಿಸಿ ನಂತರ ಮುಂದೆ ನಿರ್ಧಾರ ಕೈಗೊಳ್ಳಬಹುದು ಎನ್ನುವ ನಿರ್ಧಾರ ವ್ಯಕ್ತವಾಯಿತು. ಹೀಗಾಗಿ ಯಾವುದೇ ನಿರ್ಧಾರಕ್ಕೆ ಬಾರದೆ ಸಭೆಯನ್ನು ಮಂಗಳವಾರ ಮತ್ತೆ ನಡೆಸಲು ನಿರ್ಧರಿಸಲಾಯಿತು. ಹಾಸನ ಬಗ್ಗೆಯೂ ಚರ್ಚಿಸುವ ನಿರ್ಧಾರಕ್ಕೆ ಬಂದು ಸಭೆ ಮೊಟಕುಗೊಳಿಸಲಾಯಿತು.
ಸೋಮವಾರ ನಡೆದ ಸಭೆ ಬಳಿಕ ಮಾತನಾಡಿದ ಅಶೋಕ್, ಮಂಡ್ಯದಲ್ಲಿ ಈ ಬಾರಿ ಜೆಡಿಎಸ್ ಧೂಳಿಪಟವಾಗುವುದು ನಿಶ್ಚಿತ. ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಸುವ ಸಂಬಂಧ ಮಂಗಳವಾರ ಬೆಳಗ್ಗೆ ಯಡಿಯೂರಪ್ಪ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಾಗುತ್ತದೆ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಹೇಳಿದರು.
ಈಗಾಗಲೇ ಯಡಿಯೂರಪ್ಪ ಜೊತೆ ಮಾತುಕತೆ ಮಾಡಲಾಗಿದೆ, ಮಂಡ್ಯದಲ್ಲಿ ಯಾರನ್ನು ನಿಲ್ಲಿಸಬೇಕು ಅನ್ನೋದನ್ನ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಕಳೆದ ಬಾರಿ ಮಂಡ್ಯದಲ್ಲಿ ನಮಗೆ ಎರಡೂವರೆ ಲಕ್ಷ ಮತಗಳು ಬಂದಿದ್ದವು. ಈ ಬಾರಿ ಇನ್ನು ಒಂದು ಲಕ್ಷ ಮತಗಳು ಹೆಚ್ಚಾಗಿ ಬರುವ ಸಾಧ್ಯತೆ ಇದೆ ಎಂದರು.