ಬೆಂಗಳೂರು,ನ.29-ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಸ್ಫೋಟ ಸಂಭವಿಸಿ ಆರು ಮಂದಿ ಗಾಯಗೊಂಡಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ 25 ಗ್ರಾಂ ತೂಕದ ಸ್ಫೋಟಕ ವಸ್ತುವೊಂದನ್ನು ಪರೀಕ್ಷಿಸುವ ವೇಳೆ ದುರಂತ ಸಂಭವಿಸಿದೆ. ಘಟನೆಯಲ್ಲಿ ಐವರು ವಿಜ್ಞಾನಿಗಳು ಹಾಗೂ ಒಬ್ಬ ದಲಾಯತ್ ಸೇರಿ ಒಟ್ಟು ಆರು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವವರನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆಲ ದಿನಗಳ ಹಿಂದೆ ರಾಯಚೂರಿನಲ್ಲಿ ಸ್ಫೋಟಕ ಪತ್ತೆಯಾಗಿತ್ತು. ಚಿಂದಿ ಆಯುವ ವ್ಯಕ್ತಿಗಳ ಕೈಗೆ ಸಿಕ್ಕಿದ್ದ ಸ್ಫೋಟಕ ಸ್ಫೋಟಗೊಂಡಿತ್ತು. ಅದನ್ನು ಪೊಲೀಸರು ಪರಿಶೀಲನೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಈ ಸಂದರ್ಭದಲ್ಲಿ ಸ್ಫೋಟಗೊಂಡಿದೆ. ಇದಕ್ಕೆ ಕಾರಣವೇನು ಎಂಬುದನ್ನು ತನಿಖೆ ನಡೆಸಲಾಗುತ್ತಿದೆ.
ಮಡಿವಾಳದಲ್ಲಿರುವ ಎಫ್ಎಸ್ಎಲ್ ನಲ್ಲಿ ವಿಜ್ಞಾನಿಗಳು ಡೆಟೋನೇಟರ್ ಗಳ ಪರಿಶೀಲಿಸುತ್ತಿದ್ದರು. ಈ ಸಂದರ್ಭದಲ್ಲಿ 9 ಡೆಟೋನೇಟರ್ ಗಳ ಪೈಕಿ ಒಂದು ಸ್ಪೋಟಗೊಂಡಿದೆ. ಈ ಘಟನೆಯ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಕೆಲ ಹೊತ್ತು ಆತಂಕವನ್ನೇ ಸೃಷ್ಟಿಸಿತ್ತು. ಘಟನೆ ನಡೆದ ಸ್ಥಳಕ್ಕೆ ನಗರದ ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್, ಎಸಿಪಿ ಕರಿಬಸನಗೌಡ ಸೇರಿದಂತೆ ಹಿರಿಯ ಅಧಿಕಾರಿಗಳು ಧಾವಿಸಿ ಪರಿಶೀಲನೆ ನಡೆಸಿದ್ದಾರೆ