ಹುಬ್ಬಳ್ಳಿ: ಅಬ್ಬರದ ಮಳೆಗೆ ಹೊಳೆಯಾದ ರಸ್ತೆ!

ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸೋಮವಾರ ರಾತ್ರಿ ಸುರಿದ ಮಳೆ ಅವಾಂತರ ಸೃಷ್ಟಿಯಾಗಿದ್ದು, ಜನ ಜೀವನ ತೀರ ಸಂಕಷ್ಟಕ್ಕೆ ಸಿಲುಕಿದೆ.

ನಗರ ಪ್ರದೇಶದ ಬಾಕಳೆಗಲ್ಲಿಯಲ್ಲಿ 2 ಹಾಗೂ ಗ್ರಾಮಿಣ ಭಾಗದ ಮಂಟೂರು, ಛಬ್ಬಿ ಸೇರಿ ಇತರೆಡೆ 14 ಮನೆಗಳಿಗೆ ಧಕ್ಕೆಯಾಗಿದೆ.

ಹುಬ್ಬಳ್ಳಿ ಉಣಕಲ್ ಕೆರೆ ಹಾಗೂ ತೋಳನಕೆರೆ ಕೋಡಿ ಬಿದ್ದಿದೆ. ಉಣಕಲ್ ಕೆರೆ ಕೆಳಭಾಗದ ಹನುಮಂತ ನಗರ, ದೇವಿನಗರ, ಬನಶಂಕರಿ ಬಡಾವಣೆ ಭಾಗದ ಜನರು ಆತಂಕ ಎದುರಿಸುತ್ತಿದ್ದಾರೆ. ಇನ್ನಷ್ಟು ಮಳೆ ಬಂದರೆ ಮನೆ ಖಾಲಿ ಮಾಡುವ ಪರಿಸ್ಥಿತಿ ಇದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ತೋಳನಕೆರೆ ಕೋಡಿ ಹರಿಯುತ್ತಿರುವುದರಿಂದ ಶಿರೂರಪಾರ್ಕ್ ರಸ್ತೆಯ ಮೇಲೆ ನೀರು ಧುಮ್ಮಿಕ್ಕಿ ಹರಿಯುತ್ತಿದೆ. ಇದರ ವ್ಯಾಪ್ತಿಗೆ ಬರುವ ಕೆಲ ಅಪಾರ್ಟ್​ವೆುಂಟ್​ಗಳ ನೆಲಮಹಡಿಯಲ್ಲಿ ನೀರು ಸಂಗ್ರಹವಾಗಿದ್ದು, ಜನರು ನೀರು ಖಾಲಿ ಮಾಡಲು ಹರಸಾಹಸಪಡುತ್ತಿದ್ದಾರೆ. ಕಾರವಾರ ರಸ್ತೆಯ ಲಕ್ಷ್ಮೀನಾರಾಯಣ ಜೋನ್, ಕಿಮ್್ಸ ವಸತಿ ಗೃಹ, ಆರ್​ಪಿಎಫ್ ವಸತಿ ಗೃಹಗಳಿಗೂ ನೀರು ನುಗ್ಗಿದ್ದರಿಂದ ರಾತ್ರಿಯಿಡೀ ನಿದ್ದೆ ಮಾಡದೇ ಜನರು ಮೋಟಾರ್ ಪಂಪ್ ಹಚ್ಚಿ ನೀರು ಹೊರಹಾಕಿದ್ದಾರೆ. ರಸ್ತೆಗಳೆಲ್ಲ ಹಳ್ಳಮಯವಾಗಿದ್ದರಿಂದ ವಾಹನ ಸವಾರರು ರಸ್ತೆಗಿಳಿಯಲೋ ಬೇಡವೋ ಎಂದು ಆತಂಕಿತರಾಗಿದ್ದರು. ಸುಮಾರು ಎರಡೂವರೆ ಗಂಟೆ ಮಳೆ ಸುರಿದು ತಣ್ಣಗಾದ ಬಳಿಕ ಜನರು ಮನೆ ತಲುಪಿದರು. ಬೆಳಗ್ಗೆ ಮಳೆ ಸ್ವಲ್ಪ ಕಡಿಮೆಯಾಗಿದ್ದರೂ ಜನರಲ್ಲಿನ ಆತಂಕ ಕಡಿಮೆಯಾಗಿರಲಿಲ್ಲ. ಗ್ರಾಮೀಣ ಭಾಗದ ಛಬ್ಬಿ, ಶಿರಗುಪ್ಪಿ, ಬ್ಯಾಹಟ್ಟಿ, ಕುಸುಗಲ್, ಇಂಗಳಹಳ್ಳಿ ಸೇರಿ ಬಹುತೇಕ ಹಳ್ಳಿಗಳ ಜಮೀನುಗಳಲ್ಲಿ ಬೆಳೆ ಹಾಳಾಗಿದೆ. ಆದರೆ, ಎಷ್ಟು ಪ್ರಮಾಣದಲ್ಲಿ ಹಾಳಾಗಿದೆ ಎಂಬುದರ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಕಾಲುವೆಯಲ್ಲಿ ಸಂಗ್ರಹವಾಗಿದ್ದ ಕಸ ವಿಲೇವಾರಿ: ಶಿರೂರಪಾರ್ಕ್ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಬಳಿಯ ರಾಜಕಾಲುವೆಯಲ್ಲಿ ಪಿಶಾಚಿ ಕಳೆ ಸಂಗ್ರಹವಾಗಿತ್ತು. ಇದರಿಂದ ನೀರು ಮುಂದಕ್ಕೆ ಹರಿಯದೇ ಸಮಸ್ಯೆ ಎದುರಾಗಿತ್ತು. ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ವತಿಯಿಂದ ಕಸ ವಿಲೇವಾರಿ ಮಾಡಿದ ಬಳಿಕ ನೀರು ಸರಾಗವಾಗಿ ಹರಿದುಹೋಯಿತು.

ಮಳೆ ಪ್ರಮಾಣ: ಹುಬ್ಬಳ್ಳಿ-62.2 ಮಿ.ಮೀ., ಶಿರಗುಪ್ಪಿ-22 ಮಿ.ಮೀ, ಛಬ್ಬಿ-54.8 ಮಿ.ಮೀ., ಬ್ಯಾಹಟ್ಟಿ-14.8 ಮಿ.ಮೀ. ಮಳೆ ದಾಖಲಾಗಿದೆ.

Translate