ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ ಯಡಿಯೂರಪ್ಪ

ಯಡಿಯೂರಪ್ಪ ಕೊಟ್ಟ ಮಾತು ಕೇವಲ ಭರವಸೆಯಾಗಿ ಉಳಿಯುವುದಿಲ್ಲ. ನಾನು ಕೊಟ್ಟ ಭರವಸೆ ಕಾರ್ಯರೂಪಕ್ಕೆ ಬರಲೇ ಬೇಕು ಎನ್ನುವುದು ನನ್ನ ಅಭಿಲಾಷೆ. ಸಾಧನೆಗಳು ಮಾತಾಗಿ ಉಳಿಯಬಾರದು. ಸಾಧನೆಗಳು ಮಾತಾಡುವಂತಾಗಬೇಕು. ನಾನು ಸಾಲ ತಂದಾದರೂ ಅಭಿವೃದ್ಧಿ ಮಾಡುತ್ತೀನಿ ಎಂದು ಹೆಸರೇಳದೆಯೇ ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ಟಾಂಗ್‌ ನೀಡಿದರು.

ಬಾಗಿನ ಅರ್ಪಿಸಿದ ಬಳಿಕ ಕೆಆರ್‌ಎಸ್‌ನಲ್ಲಿ ಮಾತನಾಡಿದ ಅವರು, ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದ್ದೇನೆ. 1 ತಿಂಗಳ ಹಿಂದೆ ಈ ರಾಜ್ಯದ ಯಾವುದೇ ಜಲಾಶಯ ತುಂಬಿರಲಿಲ್ಲ. ಮುಂದೆ ಈ ನಾಡಿನ ಭವಿಷ್ಯ ಏನು ಎಂದು ಚಿಂತೆ ಮಾಡುತ್ತಿದ್ದೆವು. ಪ್ರತಿದಿನ ಮಂಡ್ಯ ಜಿಲ್ಲೆಯ ಡಿಸಿಗೆ ಕರೆಮಾಡಿ ಜಲಾಶಯದ ಒಳಹರಿವಿನ ಪ್ರಮಾಣದ ಬಗ್ಗೆ ಮಾಹಿತಿ ಪಡೆಯುತ್ತಿದ್ದೆ. ಆದರೆ, ವರುಣದೇವನ ಕೃಪೆಯಿಂದ ಕೇವಲ 4-5 ದಿನಗಳಲ್ಲಿ ಕೆಆರ್‌ಎಸ್ ತುಂಬಿದೆ ಎಂದು ಹೇಳಿದರು.

ಈ ಭಾಗದ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಭರದಿಂದ ಸಾಗಿದೆ. ಕೆರೆಗಳಲ್ಲಿ ನೀರು ಸಂಗ್ರಹದಿಂದ ಅಂತರ್ಜಲ ಕುಸಿಯುವುದು ತಪ್ಪಲಿದೆ. ಕೆಆರ್‌ಎಸ್ ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು. ದೇಶ ವಿದೇಶಿ ಪ್ರವಾಸಿಗರ ಆಕರ್ಷಣೀಯ ಸ್ಥಳವಾಗಿ ಕೆಆರ್‌ಎಸ್ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಎಸ್ಟಿಮೇಟ್ ಕಳುಹಿಸಿಕೊಡಲು ಸೂಚನೆ ನೀಡಲಾಗಿದೆ. ಕೆಆರ್‌ಎಸ್ ಗ್ರಾಮವನ್ನು ಕಂದಾಯ ಗ್ರಾಮವಾಗಿ ಘೋಷಿಸುವ ಭರವಸೆ ನೀಡಿದರು. ಇಲ್ಲಿನ ಗ್ರಾಮಸ್ಥರಿಗೆ ಹಕ್ಕು ಪತ್ರ ಕೊಡಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಕನ್ನಂಬಾಡಿ ಗ್ರಾಮದಲ್ಲಿ ನನ್ನ ತಾತ ಇದ್ದರು. ಬೂಕನಕೆರೆಯಲ್ಲಿ ನನ್ನ ತಂದೆ ಇದ್ದರು. ದಸರಾ ನೋಡಲು ನಾನು ಇಲ್ಲಿಗೆ ಬರುತ್ತಿದ್ದೆ. ಈಗ ಈ ಭಾಗವನ್ನು ಅಭಿವೃದ್ಧಿ ಪಡಿಸುವ ಸೌಭಾಗ್ಯ ನನ್ನದಾಗಿದೆ. ಅತೀ ಶೀಘ್ರದಲ್ಲಿ ಮೈಷುಗರ್ ಕಾರ್ಖಾನೆ, ಪಾಂಡವಪುರ ಪಿಎಸ್ಎಸ್‌ಕೆ ಸಕ್ಕರೆ ಕಾರ್ಖಾನೆ ಪುನರಾರಂಭ ಮಾಡಲು ಹಣಕಾಸಿನ ನೆರವು ನೀಡಲಿದ್ದೇನೆ. ಮತ್ತೊಮ್ಮೆ ಕಾರ್ಖಾನೆಗಳು ಮುಚ್ಚಿದೆ ಎಂಬ ಮಾತನ್ನು ನಾವು ಕೇಳಬಾರದು. ಯಡಿಯೂರಪ್ಪ ಭರವಸೆ ಕೊಟ್ಟರೆ ಅದು ಬರಿ ಭರವಸೆಯಾಗಲ್ಲ ಕಾರ್ಯರೂಪಕ್ಕೆ ಬರಲಿದೆ. ಕೆಲವು ಜಿಲ್ಲೆಗಳಲ್ಲಿ ಬರಗಾಲವಿದ್ದರೆ, ಕೆಲವು ಜಿಲ್ಲೆಗಳಲ್ಲಿ ಅತಿವೃಷ್ಟಿಯಾಗಿದೆ. ಕೇಂದ್ರದಿಂದ ಸಹಕಾರ ನೀಡುವ ಭರಸವೆಯನ್ನು ಪ್ರಧಾನಿ ಮೋದಿ ನೀಡಿದ್ದಾರೆ. 7-8 ರಂದು ಮೋದಿ ಅವರು ರಾಜ್ಯಕ್ಕೆ ಬರುವ ಸಾಧ್ಯತೆ ಇದೆ ಎಂದರು

Translate