ಡಾ.ರಾಜ್, ಡಾ.ವಿಷ್ಣು ಆದರ್ಶ ವ್ಯಕ್ತಿಗಳು

ದಾವಣಗೆರೆ: ಡಾ.ರಾಜ್ ನಂತರ ಸ್ಪಷ್ಟ ಕನ್ನಡ ಮಾತನಾಡುವ ಹೊಸ ತಲೆಮಾರಿನ ನಟರಲ್ಲಿ ಡಾ.ವಿಷ್ಣುವರ್ಧನ್ ಮೊದಲಿಗರು ಎಂದು ರಾಜ್ಯ ಚಲನಚಿತ್ರ ನಿರ್ದೇಶಕರ ಮಂಡಳಿ ಅಧ್ಯಕ್ಷ ವಿ.ನಾಗೇಂದ್ರ ಪ್ರಸಾದ್ ಹೇಳಿದರು.

ಸಿನಿಮಾ ಸಿರಿ ಚಲನಚಿತ್ರ ಅಭಿಮಾನಿಗಳ ಕ್ರಿಯಾತ್ಮಕ ಸಂಸ್ಥೆ ಶನಿವಾರ ಗುಂಡಿ ಮಹಾದೇವಪ್ಪ ಕಲ್ಯಾಣ ಮಂದಿರದಲ್ಲಿ ಆಯೋಜಿಸಿದ್ದ ರಾಜ್-ವಿಷ್ಣು ಮಧುರ ಸಂಗೀತ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಷ್ಣುವರ್ಧನ್ ಅವರು ನಟನಲ್ಲದೇ ಆದರ್ಶ ವ್ಯಕ್ತಿ, ಮಹಾನ್ ಮಾನವತವಾದಿ ಆಗಿದ್ದರು. ಕಷ್ಟ ಎಂದು ಬಂದವರಿಗೆ ನೆರವಾಗುತ್ತಿದ್ದರು. ಬಹುತೇಕರಿಗೆ ವಿಷ್ಣುವರ್ಧನ್ ಅವರ ಮೊದಲ ಚಿತ್ರ ವಂಶವೃಕ್ಷ ಎಂದುಕೊಂಡಿದ್ದಾರೆ. ಆದರೆ, ಶಿವಶರಣೆ ನಂಬೆಯಕ್ಕ ಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸಿದ್ದರು. ಅವರ 200ಕ್ಕೂ ಅಧಿಕ ಚಿತ್ರಗಳಲ್ಲಿ ಬಂಧನ, ಮುತ್ತಿನಹಾರ ಮೈಲುಗಲ್ಲಾಗಿವೆ ಎಂದರು.

ರಾಜ್-ವಿಷ್ಣು ಸಾಂಸ್ಕೃತಿಕ ರಾಯಭಾರಿ. ಅವರ ನಡೆ-ನುಡಿಯಲ್ಲಿ ಭಿನ್ನತೆ ಇರಲಿಲ್ಲ. ಸಾಮಾಜಿಕ ಹೊಣೆಗಾರಿಕೆ ಅರ್ಥ ಮಾಡಿಕೊಂಡು ನಡೆದ ಮೇರುವ್ಯಕ್ತಿಗಳು. ಸಹನಟರನ್ನು ಗೌರವದಿಂದ ಕಂಡವರು. ಇದನ್ನು ಭಾರತೀಯ ಚಿತ್ರರಂಗದ ಯಾರಲ್ಲೂ ಕಂಡಿಲ್ಲ. ಅವರು ಹಾಕಿಕೊಟ್ಟ ದಾರಿಯಲ್ಲಿ ನಟರು ನಡೆಯಬೇಕಿದೆ ಎಂದು ಹೇಳಿದರು.

ಆವರಗೊಳ್ಳ ಪುರವರ್ಗ ಶ್ರೀ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ನಿರ್ದೇಶಕ ರಾಜೇಂದ್ರ ಪ್ರಸಾದ್ ಸಿಂಗ್, ಶರಪಂಜರ ಎಸ್.ಶಿವರಾಮ್, ಸಂಸ್ಥೆ ಅಧ್ಯಕ್ಷೆ ವಿಜಯಲಕ್ಷ್ಮೀ ವೀರಮಾಚಿನೇನಿ, ಕಾರ್ಯಕ್ರಮ ಪರಿಕಲ್ಪನಾ ನಿರ್ದೇಶಕ ವಾಸುದೇವ್ ರಾಯ್ಕರ್, ಕಾರ್ಯದರ್ಶಿ ಪ್ರಕಾಶ್ ಮೊಳೆ, ಡಾ.ನಾಗಪ್ರಕಾಶ್, ಡಿವೈಎಸ್‌ಪಿ ರುದ್ರಮುನಿ ಇತರರಿದ್ದರು.

ವಿಷ್ಣುವರ್ಧನ್ ಸಿನಿಮಾ ಹಾಡುಗಳಿಗೆ ಜ್ಯೂನಿಯರ್ ಹೆಜ್ಜೆ: ಕಲಾವಿದರಾದ ಸಂಗೀತ ರಾಘವೇಂದ್ರ, ಅಮಿತ್ ಶೇಖರ್, ವಿ.ಎಸ್.ಮಾನಸಾ, ಟಿ.ಆರ್.ಹೇಮಂತ್‌ಕುಮಾರ್ ಇತರರು ಬಂಧನ, ಹೊಂಬಿಸಿಲು ಮುಂತಾದ ಗೀತೆಗಳಿಗೆ ಧ್ವನಿಯಾದರು. ವಿಷ್ಣುವರ್ಧನ್ ಅಭಿನಯದ ಸಿನಿಮಾ ಹಾಡುಗಳಿಗೆ ಜ್ಯೂನಿಯರ್ ವಿಷ್ಣುವರ್ಧನ್ ಹೆಜ್ಜೆ ಹಾಕಿದರು. ಪ್ರೇಕ್ಷಕರು ಕರತಾಡನ ಮಾಡುವ ಮೂಲಕ ಹುರಿದುಂಬಿಸಿದರು.

Translate