ನೋಟು ಅಮಾನ್ಯೀಕರಣದಿಂದ ತೆರಿಗೆ ವಂಚನೆಗೆ ಕಡಿವಾಣ

ಧಾರವಾಡ: ಶೀಘ್ರವಾಗಿ ಬೆಳೆಯುತ್ತಿರುವ ತೆರಿಗೆ ಪದ್ಧತಿಯನ್ನು ಡಿಜಿಟಲ್ ಮಾಡಲಾಗಿದ್ದು, ನೇರ ಹಾಗೂ ಪರೋಕ್ಷವಾಗಿ ಶೇ.85 ತೆರಿಗೆ ವಂಚನೆ ತಡೆಯಲು ಪ್ರಯತ್ನಿಸಲಾಗುತ್ತಿದೆ. ಹೀಗಾಗಿ ಜಿಡಿಪಿಗೆ ಹೊಡೆತ ಬಿದ್ದಿದೆ. ನೋಟು ಅಮಾನ್ಯೀಕರಣದಿಂದ ಭಾರಿ ಪ್ರಮಾಣದಲ್ಲಿ ತೆರಿಗೆ ವಂಚನೆಗೆ ಕಡಿವಾಣ ಬಿದ್ದಿದೆ ಎಂದು ಕೇಂದ್ರ ಹಣಕಾಸು ಹಾಗೂ ಕಾರ್ಪೆರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ತೆರಿಗೆ ಸಲಹೆಗಾರರ ದಿನ ಹಾಗೂ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತೆರಿಗೆ ಸುಧಾರಣೆ ಇಂದಿನ ತುರ್ತು ಅಗತ್ಯ. ಜಿಎಸ್​ಟಿ ತಂತ್ರಜ್ಞಾನ ಅವಲಂಬಿಸಿದೆ. ಇದು ಎರಡು ತೆರಿಗೆಗಳು ಅಥವಾ ಪುನರಾವರ್ತಿತ ತೆರಿಗೆ ಬದಲಿಗೆ ಒಂದೇ ತೆರಿಗೆ ನೀತಿ ಒಳಗೊಂಡಿದೆ. ಗ್ರಾಹಕರ ಮೇಲಿನ ತೆರಿಗೆ ಹೊರೆ ಕಡಿಮೆ ಮಾಡಲು ಈ ಪದ್ಧತಿ ಜಾರಿಗೆ ತರಲಾಗಿದೆ. ಜನರು ಇದರೊಂದಿಗೆ ಹೊಂದಾಣಿಕೆ ಆಗಬೇಕಿದೆ. ಇದಕ್ಕೆ ಸಮಯಾವಕಾಶ ಬೇಕು. ಜನರಿಗೆ ತಿಳಿವಳಿಕೆ ನೀಡಲಾಗುತ್ತಿದೆ. ದೇಶದ ಸಣ್ಣ ಹಾಗೂ ಮಧ್ಯಮ ಉದ್ಯಮಿಗಳಿಗೆ ಹೊರೆಯಾಗದಂತೆ ತೆರಿಗೆ ನೀತಿ ನಿರೂಪಿಸಲಾಗಿದೆ ಎಂದರು. ಸ್ವಾತಂತ್ರ್ಯ ಪೂರ್ವದಲ್ಲಿ ಅಂದಿನ ತೆರಿಗೆ ಸಲಹೆಗಾರರು ವೃತ್ತಿ ತೊರೆದು ಮಹಾತ್ಮ ಗಾಂಧೀಜಿ ನೇತೃತ್ವದ ಚಳವಳಿ ಬೆಂಬಲಿಸಿದ್ದರು. ಇಂದು ವೃತ್ತಿ ತೊರೆಯುವುದು ಬೇಡ. ಸಮರ್ಪಕವಾಗಿ ತೆರಿಗೆಯ ಮೌಲ್ಯಮಾಪನ ಮಾಡಿ ದೇಶಕ್ಕೆ ಕೊಡುಗೆ ನೀಡಬೇಕು ಎಂದರು.

ಸಂಘದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ದೇಶದ ಆರ್ಥಿಕ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸುವ ತೆರಿಗೆ ಸಲಹೆಗಾರರು ವೃತ್ತಿ ನೈತಿಕತೆ ಕುರಿತು ಪ್ರತಿಜ್ಞೆ ಸ್ವೀಕರಿಸಿದ್ದಾರೆ. ಅದನ್ನು ವೃತ್ತಿಯಲ್ಲಿ ಪಾಲಿಸುವುದು ಅಷ್ಟೇ ಮುಖ್ಯ. ದೇಶದಲ್ಲಿ ಜಿಎಸ್​ಟಿ ಮೂಲಕ ಬದಲಾವಣೆಗಳು ಬರುತ್ತಿವೆ. ತೆರಿಗೆ ಸಲಹೆಗಾರರು ಕಕ್ಷಿದಾರರಿಗೆ ಸೂಕ್ತ ಕಾನೂನು ಸಲಹೆ ನೀಡಬೇಕು ಎಂದರು. ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ತೆರಿಗೆ ಸಲಹೆಗಾರರು ಮತ್ತು ಚಾರ್ಟರ್ಡ್ ಅಕೌಂಟೆಂಟ್​ಗಳ ಪಾತ್ರ ಮಹತ್ವದ್ದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ತೆರಿಗೆ ಪಾವತಿದಾರರ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಾರೆ. ಕಕ್ಷಿದಾರರಿಗೆ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.

Translate