ನವದೆಹಲಿ,ಮಾ.26-ಲೋಕಸಭೆ ಚುನಾವಣೆ ಏ.11 ರಿಂದ ಆರಂಭವಾಗಲಿದ್ದು, ಏಳು ಹಂತಗಳಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ತಮ್ಮ ಹಕ್ಕು ಚಲಾಯಿಸುವಂತೆ ಈಗಾಗಲೇ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಮಧ್ಯೆ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್, ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.
ಆಟದ ಸಲುವಾಗಿ ಮತ ಹಾಕುವ ಕ್ಷೇತ್ರದಿಂದ ಹೊರಗಿರುವ ಕ್ರಿಕೆಟಿಗರಿಗೆ ತಾವು ಆಟ ಆಡುತ್ತಿರುವ ಪ್ರದೇಶದಿಂದಲೇ ಮತ ಹಾಕುವ ಅವಕಾಶ ಕಲ್ಪಿಸಬೇಕು ಎಂದು ರವಿಚಂದ್ರನ್ ಅಶ್ವಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೋರಿದ್ದಾರೆ. ಸದ್ಯ ಐಪಿಎಲ್‍ನಲ್ಲಿ ಪಾಲ್ಗೊಂಡಿರುವ ಅವರು ಈ ಬಗ್ಗೆ ಟ್ವಿಟ್ ಮೂಲಕ ಮೋದಿ ಅವರ ಗಮನ ಸೆಳೆಯಲು ಯತ್ನಿಸಿದ್ದಾರೆ. ಮತದಾನ ಪ್ರತಿ ಪ್ರಜೆಯ ಹಕ್ಕು. ಆದರೆ ಪ್ರಜೆ ತಾನು ವಾಸವಿರುವ ಸ್ಥಳದ ಕ್ಷೇತ್ರದಲ್ಲೇ ಮತ ಚಲಾಯಿಸಬೇಕು ಎಂಬ ನಿಯಮ ಇದೆ. ಇದರಿಂದಾಗಿ ಚುನಾವಣೆ ದಿನ ಮತ ಕ್ಷೇತ್ರದಿಂದ ಅನಿವಾರ್ಯವಾಗಿ ಹೊರಗಿರಬೇಕಾದವರು ಮತದಾನ ಮಾಡಲು ಆಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಅದರಲ್ಲೂ ಕ್ರಿಕೆಟಿಗರು ಆಟದ ಪ್ರಯುಕ್ತ ಬೇರೆ ರಾಜ್ಯ–ದೇಶಗಳಿಗೆ ಹೋಗಬೇಕಾಗುತ್ತದೆ. ವಿಶೇಷವಾಗಿ ಈಗ ಐಪಿಎಲ್‍ನಲ್ಲಿ ಆಡುತ್ತಿರುವ ಬೇರೆ ಬೇರೆ ರಾಜ್ಯಗಳ ಕ್ರಿಕೆಟಿಗರು ತಮ್ಮ ಮತ ಕ್ಷೇತ್ರದಿಂದ ಹೊರಗಿರುವುದರಿಂದ ಮತ ಹಾಕಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕ್ರಿಕೆಟಿಗರಿಗೆ ಎಲ್ಲಿಂದ ಬೇಕಿದ್ದರೂ ಮತ ಚಲಾಯಿಸುವ ಅವಕಾಶ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.