ವಿಶ್ವವಿಖ್ಯಾತ ಮೈಸೂರು ದಸರಾಗೆ ಕ್ಷಣಗಣನೆ ಆರಂಭವಾಗಿದೆ. 9 ದಿನಗಳ ಕಾಲ ನಡೆಯುವ ದಸರಾ ಉತ್ಸವಕ್ಕೆ ಈಗಾಗಲೇ ಭರದ ಸಿದ್ಧತೆ ನಡೆಯುತ್ತಿದೆ. ಅಂತೆಯೇ ಇಂದು ದಸರಾ ಗಜಪಡೆಗೆ ಅಂತಿಮ ತಾಲೀಮು ನಡೆಯಿತು.
ಗಜಪಡೆಯ ನಾಯಕ ಅರ್ಜುನ ಮರದ ಅಂಬಾರಿ ಹೊತ್ತು ಸಾಗಿದ್ದಾನೆ. ಮೊದಲು ಮರದ ಅಂಬಾರಿಗೆ ಪೂಜೆ ಸಲ್ಲಿಸಲಾಯಿತು. ನಂತರ ಡಿಸಿಎಫ್ ಅಲೆಕ್ಸಾಂಡರ್, ಪಶು ವೈದ್ಯ ಡಾ. ನಾಗರಾಜ್ ಮಾರ್ಗದರ್ಶನದಲ್ಲಿ ಮಾವುತರು, ಕಾವಾಡಿಗಳು ಆನೆ ಬೆನ್ನಿಗೆ ಮರದ ಅಂಬಾರಿ ಕಟ್ಟಿದರು.ಇದಕ್ಕೆ ಕ್ರೇನ್ ಸಹಾಯ ಪಡೆದುಕೊಳ್ಳಲಾಯಿತು. ಅರಮನೆ ಆವರಣದಿಂದ ಬನ್ನಿ ಮಂಟಪದವರಗೆ ಗಜಗಾಂಭೀರ್ಯದಿಂದ ಕ್ಯಾಪ್ಟನ್ ಅರ್ಜುನ ಹೆಜ್ಜೆ ಹಾಕಿದ.
ಸುಮಾರು 35Oಕೆ.ಜಿ.ತೂಕದ ಮರದ ಅಂಬಾರಿ,3OO ಕೆಜಿ ತೂಕದಷ್ಟು ಮರಳು ಮೂಟೆ ಸೇರಿ ಒಟ್ಟು 65O ಕೆಜಿ ಭಾರ ಹೊತ್ತು ಅರ್ಜುನ ಸಾಗಿದ್ದಾನೆ. ಈ ಮೂಲಕ ಆನೆಗಳಿಗೆ ಅಂಬಾರಿ ಹೊರುವ ತರಬೇತಿಯ ಅಂತಿಮ ಸಿದ್ಧತೆ ನಡೆಸಲಾಯಿತು. ಇನ್ನು, ಅಭಿಮನ್ಯು, ಧನಂಜಯ ಆನೆಗಳಿಗೂ ಇಂದೇ ತಾಲೀಮು ನೀಡಲಾಗುತ್ತದೆ. ಈ ಗಜಪಡೆಗಳು ಮೈಸೂರು ದಸರಾದಲ್ಲಿ ಪ್ರಮುಖ ಪಾತ್ರ ವಹಿಸಲಿವೆ.
ಸೆಪ್ಟೆಂಬರ್ 29 ರಂದು ಬೆಳಿಗ್ಗೆ 9:30 ರಿಂದ 10:20 ರೊಳಗೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ಬೆಟ್ಟದಲ್ಲಿ ದಸರಾ ಉತ್ಸವ ಉದ್ಘಾಟನೆಯಾಗಲಿದೆ. ಸಾಹಿತಿ ಎಸ್.ಎಲ್ ಭೈರಪ್ಪ ಅವರು ಈ ಬಾರಿಯ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಅಕ್ಟೊಬರ್ 8 ರಂದು 2:15 ರಿಂದ 2:58 ರೊಳಗೆ ಸಲ್ಲುವ ಶುಭಲಗ್ನದಲ್ಲಿ ಅರಮನೆಯಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಸಂಜೆ 4:30 ರಿಂದ 4:58 ರಲ್ಲಿ ಸಲ್ಲುವ ಮಕರ ಶುಭಲಗ್ನದಲ್ಲಿ ದಸರಾ ಉದ್ಘಾಟಕರಾದ ಎಸ್ ಎಲ್ ಬೈರಪ್ಪ ಹಾಗೂ ಮುಖ್ಯಮಂತ್ರಿಗಳಿಂದ ದಸರಾ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ.
ಈ ಬಾರಿಯ ಮೈಸೂರು ಯುವ ದಸರಾ ಮಹೋತ್ಸವಕ್ಕೆ ಬ್ಯಾಡ್ಮಿಂಟನ್ ತಾರೆ ವಿಶ್ವಚಾಂಪಿಯನ್ ಪಿ.ವಿ. ಸಿಂಧು ಚಾಲನೆ ನೀಡಲಿದ್ದಾರೆ. ಇತ್ತೀಚೆಗೆ ಸಂಸದ ಪ್ರತಾಪ್ ಸಿಂಹ ಕಾರ್ಯಕ್ರಮ ಉದ್ಘಾಟಿಸಲು ಆಗಮಿಸುವಂತೆ ಸಿಂಧು ಅವರನ್ನು ಅಧಿಕೃತವಾಗಿ ಆಹ್ವಾನಿಸಿದರು. ಅಕ್ಟೋಬರ್ 1ರಂದು ಯುವ ದಸರಾ ಪ್ರಾರಂಭಗೊಳ್ಳಲಿದೆ.