ಭಾರತದ ಬಾಹ್ಯಾಕಾಶ ಕ್ಷೇತ್ರದ ಮಹತ್ವಾಕಾಂಕ್ಷಿ ಮಿಷನ್ ಚಂದ್ರಯಾನ-2 ಉಡಾವಣೆ ಕನಸು ಇಂದು ನನಸಾಗಿದೆ. ಇಂದು ಮಧ್ಯಾಹ್ನ ಸರಿಯಾಗಿ 2.43 ನಿಮಿಷಕ್ಕೆ ಚಂದ್ರಯಾನ-2 ನೌಕೆಯನ್ನು ಹೊತ್ತ ಬಾಹುಬಲಿ ನಭಕ್ಕೆ ಚಿಮ್ಮಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋ ಜಿಎಸ್ಎಲ್ವಿ ಮಾರ್ಕ್-111 ರಾಕೆಟ್ ಮೂಲಕ ಚಂದ್ರಯಾನ-2 ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಇದೊಂದು ಜಾಗತಿಕ ಮಟ್ಟದಲ್ಲಿ ಕುತೂಹಲ ಮೂಡಿಸಿದ್ದ ಯೋಜನೆಯಾಗಿತ್ತು. ಜು.15ರಂದು ಮುಂಜಾನೆ 2.51ಕ್ಕೆ ಉಡಾವಣೆ ಮಾಡಲು ಇಸ್ರೋ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿತ್ತು. ಆದರೆ, ಕೊನೇ ಕ್ಷಣದಲ್ಲಿ ರಾಕೆಟ್ ಎಂಜಿನ್ನಲ್ಲಿ ತಾಂತ್ರಿಕ ದೋಷ ಕಂಡಿದ್ದರಿಂದ ಉಡಾವಣೆಗೂ 56 ನಿಮಿಷ ಮೊದಲು ರದ್ದುಪಡಿಸಲಾಗಿತ್ತು.
ನಂತರ ಇಸ್ರೋ ವಿಜ್ಞಾನಿಗಳು ಅದನ್ನೆಲ್ಲ ದುರಸ್ತಿ ಪಡಿಸಿದ್ದಾಗಿ ಎರಡು ದಿನಗಳ ಹಿಂದೆ ತಿಳಿಸಿದ್ದರು. ಶನಿವಾರ (ಜು.20) ಎರಡು ಬಾರಿ ಪ್ರಾಯೋಗಿಕ ಪರೀಕ್ಷೆ ಕೂಡ ನಡೆಸಿ ಅದರಲ್ಲಿ ಯಶಸ್ವಿಯಾಗಿದ್ದಾಗಿ ಇಸ್ರೋ ಮಾಜಿ ಮುಖ್ಯಸ್ಥ ಕಿರಣ್ಕುಮಾರ್ ತಿಳಿಸಿದ್ದರು. ಇಸ್ರೋ ಟ್ವೀಟ್ ಮಾಡುವ ಮೂಲಕ ಕಾಲಕಾಲಕ್ಕೆ ಚಂದ್ರಯಾನ-2 ಉಡಾವಣೆಯ ಸಿದ್ಧತೆಗಳ ಬಗ್ಗೆ ತಿಳಿಸುತ್ತಿತ್ತು. ಇಂದು ನಭಕ್ಕೆ ಚಿಮ್ಮಿರುವ ಚಂದ್ರಯಾನ-2 ಮಿಷನ್ ಆಗಸ್ಟ್ 14ಕ್ಕೆ ಚಂದ್ರನ ಕಕ್ಷೆಯತ್ತ ಸಾಗಲಿದೆ.
ಸೆಪ್ಟೆಂಬರ್ 6 ಅಥವಾ 7ಕ್ಕೆ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಯಲಿದೆ ಎಂದು ಕಿರಣ್ಕುಮಾರ್ ತಿಳಿಸಿದ್ದಾರೆ.